"ಪ್ಲೀಸ್ ಫಾಸನ್ ಯುವರ್ ಸೀಟ್ ಬೆಲ್ಟ್ಸ್, ವಿ ವಿಲ್ ಬಿ ಲ್ಯಾಂಡಿಂಗ್ ಇನ್ ಸ್ಕೈ ಹಾರ್ಬರ್ ಇಂಟರ್ನ್ಯಾಷನಲ್ ಏರ್ ಪೋರ್ಟ್ ಇನ್ ಎ ವೈಲ್". ಈ ಶಬ್ದ ಕೇಳಿದಾಗ ಏನೋ ಒಂದು ತರಹದ ಕೂತುಹಲ, ಏನೋ ಒಂದು ತರಹದ ತವಕ, ಏನೋ ಒಂದು ತರಹದ ಭಯ, ಏನೋ
ಒಂದು ತರಹದ ಖುಶಿ. ಮೊದಲ ಬಾರಿಗೆ ತಾಯ್ನಾಡಿನಿಂದ ಹೊರ ಬಂದು, ಅಮೇರಿಕದ ನೆಲದಲ್ಲಿ ಕಾಲಿಡುತಿದ್ದೆ. ಹೊಸ ದೇಶ, ಹೊಸ ಜಾಗ, ಹೊಸ ಜನ ಎಲ್ಲ ಒಂದು ರೀತಿಯಲ್ಲಿ ಕನಸಿನಂತೆ ಕಾಣುತಿತ್ತು; ಕನಸು ನನಸಾಗಿದ್ದಂತೆ ಭಾಸವಾಗುತಿತ್ತು.ವಿಮಾನದಿಂದ ಹೊರ ನೋಡಿದಾಗ ಎಲ್ಲೆಲ್ಲೂ ವರ್ಣರಂಜಿತ ದೀಪಗಳಿಂದ ಕೂಡಿದ ರಸ್ತೆಗಳು ಹಾಗೂ ಕಟ್ಟಡಗಳೇ ಕಾಣುತಿದ್ದವು. ಆ ದೃಶ್ಯ "ಅಮೇರಿಕ ಅಮೇರಿಕ"ಚಿತ್ರದ "ಆಹಾ ಅಮೇರಿಕ" ಗೀತೆಯನ್ನು ನೆನಪಿಸುತಿತ್ತು. ಅವೆಲ್ಲ ನೋಡಿ ಮನಸ್ಸಿಗೆ ಏನೋ ಒಂದು ತರಹದ ಪುಳಕ, ರೋಮಾಂಚನ. ಜೊತೆಗೆ ತಾಯ್ನಾಡನ್ನು ಅಗಲಿರಬೇಕು ಎನ್ನುವ ಬೇಸರ ಕೂಡ. ಈ ಮಿಶ್ರ ಅನಿಸಿಕೆಗಳ ನಡುವೆ ಇರುವಾಗಲೇ, ಗಾಳಿಯನ್ನು ಸೀಳಿ ಮುನ್ನಡೆಯತ್ತಿದ್ದ ವಿಮಾನ, ಅಮೇರಿಕ ನೆಲದಲ್ಲಿ ಕಾಲಿಟ್ಟಿಯೇ ಬಿಟ್ಟಿತ್ತು.
ನನ್ನ ಗೆಳೆಯರಾಗಿದ್ದ ಶಾದುಲಿಯವರು ನನಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಭಾರವಾಗಿದ್ದ ಬ್ಯಾಗಗಳನ್ನು ತಳ್ಳುತ್ತ ಕಾರಿನೆಡೆಗೆ ಮುಂದಾದೆವು. ಅಲ್ಲಿನ ಶಿಸ್ತುಬದ್ದ ರಸ್ತೆಗಳ ನಡುವೆ ಕಾರಿನಲ್ಲಿ ಹಾದು ಮನೆ ಸೇರುವಷ್ಟರಲ್ಲಿ ಸಮಯ ರಾತ್ರಿ ಎಂಟಾಗಿತ್ತು. ಮನೆ ಚಿಕ್ಕದಾಗಿ, ಚೊಕ್ಕವಾಗಿತ್ತು. ಬೇಕಾದ ಸವಲತ್ತುಗಳೋಂದಿಗೆ ಕೂಡಿದ್ದ ಮನೆ ಇಂಗ್ಲೀಷ್ ಚಿತ್ರಗಳಲ್ಲಿ ನೋಡಿದ ಮನೆಗಳನ್ನು ನೆನಪಿಸುತಿತ್ತು.
ಅಂದಿನ ರಾತ್ರಿಗೆ ಗೆಳೆಯರ ಮನೆಯಲ್ಲಿ ಊಟದ ವ್ಯವಸ್ಥೆ ಕೂಡ ಆಗಿತ್ತು. ಬಿಸಿ ಬಿಸಿಯಾದ ಪೂರಿ, ಸಾಗು ಮತ್ತು ಅನ್ನ ಸಾಂಬಾರ್ ಸ್ವಾಗತ ಕೋರಿತ್ತು. ವಿಮಾನದಲ್ಲಿ ಉಪ್ಪು ಹುಳಿ ಇಲ್ಲದ ಊಟ ತಿಂದು, ಬಾಯಿ ಮೃಷ್ಟಾನ್ನ ಭೋಜನವನ್ನು ನಿರೀಕ್ಷಿಸುತಿತ್ತು. ನಿರೀಕ್ಷೆಯಂತೆ ಒಳ್ಳೆ ಊಟ ಕೂಡ ಸಿಕ್ಕಿದ್ದು ಮನಸ್ಸಿಗೆ ಬಹಳ ನೆಮ್ಮದಿ ತಂದಿತ್ತು. ತಕ್ಕಂತೆ ಕಣ್ಣುಗಳು ವಿಶ್ರಾಂತಿಯನ್ನು ಕೋರುತ್ತಿದ್ದವು. ಮನೆ ತಲುಪಿದ್ದೇ ತಡ, ಹಾಸಿಗೆಯ ಮೇಲೆ ಶವಾಸನ ಮಾಡಲಾರಂಭಿಸಿದೆ.
ಮೊದಲ ಸೂರ್ಯೋದಯ....
ಘಂಟೆ ಒಂಬತ್ತಾಗಿತ್ತು; ಒದರಿಕೊಂಡ ಫೋನ್ ನಿದ್ದೆ ಗೆಡಿಸಿತ್ತು; ಗೆಳೆಯ ಶಶಿ ಕರೆ ಮಾಡಿದ್ದ. ಮೊದಲ ದಿನವೇ ವಿಹಾರದ ವ್ಯವಸ್ಥೆಯಾಗಿತ್ತು :). ಕ್ಷಣ ಮಾತ್ರದಲ್ಲಿ ತಯಾರಾದ ನಾನು, ವಿಹಾರಕ್ಕೆ ತೆರಳಲು ಅಣಿಯಾದೆ. ಅಮೇರಿಕದಲ್ಲಿ ಮೊದಲ ವಿಹಾರ ಅದಾಗಿತ್ತು. ೫೦ ಮೈಲಿ ದೂರದಲ್ಲಿತ್ತು ಅಪಾಚೆ ಸರೋವರ. ಹಲವಾರು ತಡೆಗಳನ್ನೊಳಗೊಂಡ ವಿಹಾರ, ಕೊನೆಗೆ ಕನಸಾಗಿಯೆ ಉಳಿಯಿತು. ಕಷ್ಟಕರವಾದ ರಸ್ತೆಯೇ ನಮ್ಮ ಆಸೆಗೆ ಮಣ್ಣೆರಚಿತ್ತು. ಸರೋವರ ತಗ್ಗು ಪ್ರದೇಶದಲ್ಲಿದ್ದುದ್ದರಿಂದ, ಕತ್ತಲಾಗುವ ಮುನ್ನ ಆ ಹಾದಿ ದಾಟಬೇಕಾಗಿತ್ತು. ಆ ೫೦ ಮೈಲಿ ದಾರಿ, ೫೦೦ ಮೈಲಿಯಂತೆ ಭಾಸವಾಗಿತ್ತು. ಹೋದ ದಾರಿಗೆ ಸುಂಕವಿಲ್ಲವೆಂದು ತಿಳಿದು ಹಿಂತಿರುಗಿದೆವು. ಅಲ್ಲಿಗೆ ಮುಗಿದಿತ್ತು ಅಮೇರಿಕಾದಲ್ಲಿನ ಮೊದಲ ವಿಹಾರ. ಅದು ಪ್ರಯಾಸದ ಪ್ರವಾಸವಾಗಿತ್ತು.
ಕೊನೆಗೂ ಫಲಿಸಿತು.....
ಹಿಂದಿನ ವಿಹಾರದ ಕಹಿ ನೆನಪು ಮಾಸುವ ಮುಂಚೆಯೇ ಮತ್ತೊಂದು ವಿಹಾರದ ವ್ಯವಸ್ಥೆಯಾಗಿತ್ತು. 268 ಮೈಲಿ ದೂರದಲ್ಲಿದ್ದ ಆಂಟಿಲೊಪ್ ಕ್ಯಾನ್ಯನ್ (Antelope Canyon) ನಮ್ಮ ಗುರಿಯಾಗಿತ್ತು. ಆ ದೂರ ಕ್ರಮಿಸಿ ಗೂಡು ಸೇರಬೇಕಾದಲ್ಲಿ ಬೆಳಗಿನ ಜಾವ ೬ ಕ್ಕೆ ಹೊರಡಬೇಕಾದದ್ದು ಅನಿವಾರ್ಯವಾಗಿತ್ತು. ವಾಸ್ತವದಲ್ಲಿ ನಾವುಗಳು ಆ ಹೊತ್ತಿನಲ್ಲಿ ಪ್ರಪಂಚವನ್ನು ಕಂಡವರೇ ಅಲ್ಲ. ಅದು ನಮಗೆ "ಕುದುರೆ ಕೊಂಬು" ಸಂಗತಿಯಾಗಿತ್ತು. ಅಂದು ಜಗತ್ತಿನ ೮ನೇ ಅದ್ಭುತ ನಡೆದೇ ಹೋಗಿತ್ತು. ನಾವೆಲ್ಲ ೬ ಕ್ಕೆ ಹೊರಟೇ ಬಿಟ್ಟಿದ್ದೆವು.
ಅಲ್ಪವಿರಾಮಗಳನ್ನೊಳಗೊಂಡ ಪ್ರಯಾಣ ಮುಗಿದು ಕ್ಯಾನ್ಯನ್ ತಲಪುವಷ್ಟರಲ್ಲಿ ಸೂರ್ಯ ನೆತ್ತಿ ಮೇಲಿದ್ದು, ಮುಕ್ಕಣ್ಣನಂತೆ ಸುಡುತ್ತಿದ್ದ. ಹೊರ ನೋಟಕ್ಕೆ ಕ್ಯಾನನ್ ಬರಿಯ ಬೆಟ್ಟದಂತೆ ಕಂಡಿತ್ತು. ರಣ ರಣ ಬೆಟ್ಟ ಗುಡ್ಡ. ಅಪೇಕ್ಷಿಸಿದ ಹಾಗೆ ಪಿಸುದನಿಸಿತು, "ಇದನ್ನ ನೋಡಕ್ಕೆ ಅಲ್ಲಿಂದ ಬಂದ ಹಾಗಾಯ್ತಲ್ಲೋ". ಒಂದು ಕ್ಷಣ ಎಲ್ಲರಿಗೂ ಅದು ನಿಜ ಎಂದೆನಿಸಿತು. ಆದರೂ ಪಟ್ಟ ಶ್ರಮ ವ್ಯರ್ಥವಾಗದಿರಲೆಂದು, ತಲೆಗೆ $೨೫ ಕೊಟ್ಟು ಮುಂದುವರಿದೆವು. ನಾವು ನೆಲಸಿರುವ ಜಾಗ ಮರಭೂಮಿ ಎಂದು ಆಗಲೇ ಅರಿವಾಗಿದ್ದು. ಕಾರಿನಲ್ಲಿದ್ದರೂ, ಮರಳುಗಾಡಿನ ಬಂಡಿಯ (ಒಂಟೆ) ಮೇಲೆ ಸವಾರಿ ಮಾಡಿದ ಅನುಭವವೇ ಆಗಿತ್ತು. ೩ ಮೈಲಿ ದೂರ ಕ್ರಮಿಸಲು ಹೆಚ್ಚು ಕಡಿಮೆ ಅರ್ಧ ತಾಸು ಬೇಕಾಯಿತು.ಅಗೋ ಬಂದು ತಲುಪಿದೆವು. ದಾರಿಯುದ್ದಕ್ಕೂ, ಸ್ಥಳಿಯರೇ ಆಗಿದ್ದ ಕ್ಯಾರೆಲ್, ನಮಗೆ ಕ್ಯಾನ್ಯನಿನ ಇತಿಹಾಸದ ಪಠ್ಯ ನಡೆಸುತ್ತ ಬಂದಿದ್ದರು. ಕ್ಯಾನ್ಯನಿನ ಮಾರ್ಗದರ್ಶನವನ್ನೇ ಕಸುಬಾಗಿಸಿಕೊಂಡಿದ್ದ ಆ ಕುಟುಂಬ, ಆ ಜಾಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು, ಅಲ್ಲಿ ಬರುವಂತಹ ಎಲ್ಲ ಯಾತ್ರಿಕರಿಗೆ ಜಾಗದ ಪರಿಚಯ ಮಾಡಿಕೊಡುವುದನ್ನು ಪ್ರವೃತ್ತಿಯಾಗಿಸಿಕೊಂಡಿದ್ದರು.
ಆಚೆಯಿಂದ ರಣಭೂಮಿಯಂತೆ ಕಂಡ ಬೆಟ್ಟ ಗುಡ್ಡಗಾಡುಗಳ ಸಾಲು, ಕ್ಷಣಮಾತ್ರದಲ್ಲಿ ಸ್ವರ್ಗದಂತೆ ಗೋಚರಿಸಲಾರಂಭಿಸಿದವು. ಅದರ ಸ್ವಾಗತವೇ ಅದ್ಧೂರಿಯಾಗಿತ್ತು. ಬೆಟ್ಟಗುಡ್ಡಗಳ ನಡುವೆ ಇರುವ ಬಿರುಕುಗಳು ಮತ್ತು ಅವುಗಳ ನಡುವೆ ಹರಿವ ಬೆಳಕು, ಛಾಯಾಗ್ರಾಹಕರಿಗೆ ಸ್ವರ್ಗದ ಅನುಭವವನ್ನೇ ಮಾಡಿಸಿತ್ತು. ನನ್ನ ಕ್ಯಾಮೆರ ಬಿಡುವಿಲ್ಲದೆ, ಪ್ರಕೃತಿ ಸೊಬಗನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿತ್ತು. ನಾನು ಈ ಲೋಕವನ್ನೇ ಮರೆತಿದ್ದೆ. ಈ ಜಾಗವನ್ನು ನೋಡಿದ ಕೂಡಲೇ ನನ್ನ ಛಾಯಾಚಿತ್ರ ಸಂಕಲನಕ್ಕೆ "ಫೋಟೊಗ್ರಾಫರ್ಸ್ ಪ್ಯಾರಡೈಸ್"ಎಂದು ನಾಮಕರಣ ಮಾಡುವುದೆಂದು ನಿರ್ಧರಿಸಿದೆ.ಜ್ವಾಲಮುಖಿಯಿಂದ ನಿರ್ಮಿತವಾದ ಈ ಬೆಟ್ಟಗುಡಗಳ ನಡುವೆ ಬಿರುಕು ಬರಲು ಹಲವು ಸಹಸ್ರ ವರ್ಷಗಳ ಹಿಂದೆ ಬಂದ ನೆರೆಯೇ ಕಾರಣವೆಂದು ತಿಳಿದು ಬಂತು. ಆ ನೆರೆಯಾದರೂ ಎಂತ ರಸಿಕನಿರಬೇಕು. ತನ್ನ ಪ್ರೀತಿಯನ್ನೆಲ್ಲ ಧಾರೆಯೆರೆದು, ಪ್ರಕೃತಿಯ ಮಡಿಲ್ಲನ್ನೇ ಕೊರೆದು, ತನ್ನ ಛಾಯೆ ಬಿಟ್ಟು ಹೋಗಿದೆಯಲ್ಲ. ಒಬ್ಬಶಿಲ್ಪಿ
ಅದನ್ನೆಲ್ಲ ಕೆತ್ತಿರ ಬಹುದೆನೋ ಎನ್ನುವ ಕಲ್ಪನೆ ಮೂಡಿಸುವಂತಿತ್ತು. ಆದರೆ ಅವೆಲ್ಲ ಪ್ರಕೃತಿಯದ್ದೇ ಕೆತ್ತನೆಯಾಗಿ, ಅದ್ಭುತವಾಗಿತ್ತು;ಅತಿ ಅದ್ಭುತವಾಗಿತ್ತು. ಆ ಪ್ರಕೃತಿ ಸೌಂದರ್ಯವನ್ನು ಸವೆಯುತ್ತ ಗೂಡಿನೆಡೆಗೆ ಪ್ರಯಾಣ ಬೆಳೆಸಿದೆವು. ಕ್ಯಾನ್ಯನ್ ಸೌಂದರ್ಯಕ್ಕೆ ಮನ ಸೋತಿದ್ದೆವು....’ಸ್ವದೇಸ’ದ ಮಳೆಯಾಗಿತ್ತು....
ವಾರಂತ್ಯ ಕಳೆಯುವುದು ಕಷ್ಟಕರವಾಗಿದ್ದರಿಂದ, ಚಲನಚಿತ್ರ ನೋಡಿ ಕಾಲಹರಣ ಮಾಡುವುದು ಲೇಸು ಎಂದೆನಿಸಿತು. ಆ ಹೊತ್ತಿಗೆ ತಲೆಗೆ ಹೊಳೆದದ್ದು ’ಸ್ವದೇಸ್’ ಸಿನಿಮ. ಪರದೇಶದಲ್ಲಿದ್ದು, ಆ ಚಲನಚಿತ್ರ ನೋಡುವುದರಲ್ಲಿ ಏನೋ ಮಜವಿತ್ತು. "ಯೆ ಜೊ ದೇಸ್ ಹೆ ತೆರ" ಈ ಹಾಡು ಕೇಳಿದಾಗಲಂತು ಮೈ ರೋಮಾಂಚನಗೊಂಡಿತ್ತು. ಈ ರೋಮಾಂಚನಕ್ಕೆ ಮೆರಗು ನೀಡುವಂತೆ ಕಾರ್ಮೋಡ ಕವಿದಿತ್ತು. ಸಂಜೆ ೬ ಕ್ಕೆ ಕತ್ತಲಾಗಿ, ಒಂದೆ ಸಮನೆ ಮಳೆ ಸುರಿಯಲಾರಂಭಿಸಿತು. ’ಸ್ವದೇಸ್’ ಚಿತ್ರದ ಜೊತೆ ಆ ಮಣ್ಣಿನ ವಾಸನೆ, ಮೊಸರನ್ನದ ಜೊತೆ ಉಪ್ಪಿನಕಾಯಿ ಇದ್ದ ಹಾಗಿತ್ತು...
ಚಲನಚಿತ್ರಗಳೆಂದರೆ ದೂರ ಓಡುತ್ತಿದ್ದ ನನಗೆ, ಅವೇ ವ್ಯಯಕಾಲದ ಗೆಳೆಯರಾಗಿ ಬಿಟ್ಟಿದ್ದವು. ವಾರಕ್ಕೊಂದಂತೆ ಚಲನಚಿತ್ರ ನೋಡಲಾರಂಭಿಸಿದೆ. ಮುಂಗಾರು ಮಳೆ, ನಮ್ಮೂರ ಮಂದಾರ ಹೂವೆ, ಜೋ ಜೀತ ವೊಹಿ ಸಿಕಂದರ್ ಇನ್ನು ಹಲವಾರು ಚಿತ್ರಗಳನ್ನು ನೋಡಿ ’ಗೆಳೆಯರ’ ಜೊತೆ ಕಾಲ ಕಳೆಯುತ್ತಿದ್ದೆ. ಇದನ್ನೇ ವಾರಂತ್ಯದ ದಿನಚರಿಯನ್ನಾಗಿಸಿಕೊಂಡೆ...
’ಕಾರ್ ಕಾರ್ ಕಾರ್ ಎಲ್ಲ್ನೋಡಿ ಕಾರ್’......
ಈ ದೇಶದಲ್ಲಿ ಬರಿ ಕಾರುಗಳದ್ದೇ ದರಬಾರು. ರಸ್ತೆಗಳಲ್ಲಂತು ಕಾರುಗಳಲ್ಲದೇ ದ್ವಿಚಕ್ರ ವಾಹನ ನೋಡಿದರೆ, ನಾವು ಚಿಕ್ಕವರಿದ್ದಾಗ, ಆಗಲೋ ಈಗಲೋ ಬರುವ ವಿಮಾನ ನೋಡುತ್ತಿದ್ದ ಸಂಗತಿಯನ್ನು ನೆನಪಿಸುತಿತ್ತು. ಆಯಾ ಕಾಲಕ್ಕೆ, ಆಯಾ ಜಾಗಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಗಿದ್ದರಿಂದ ಕಾರು ದೈನಂದಿಕ ಜೀವನಕ್ಕೆ ಅನಿವಾರ್ಯವಾಗಿ ಹೋಗಿತ್ತು. ಬೆಂಗಳೂರಿನಲ್ಲಿದ್ದಾಗ ಕಾರು ಓಡಿಸಲು ಕಲಿಯುವ ಸಂದರ್ಭವೇ ಬಂದೊದಗಲಿರಲಿಲ್ಲ. ಅದರ ಪರಿಣಾಮ ಇಲ್ಲಿ ತೋರಗೊಂಡಿತು. ಜೀವನ ಕಷ್ಟಕರವೆನಿಸಿತು. ಕಾರು ಕಲಿಯುವ ಸಾಹಸಾಕ್ಕೆ ಕೈ ಹಾಕಿಯೇ ಬಿಟ್ಟೆ.
ಕೇವಲ ಆರೇ ತಾಸುಗಳಲ್ಲಿ ಕಾರು ಕಲಿತೇ. ಆ ಆರು ತಾಸುಗಳು ಕಾರು ಓಡಿಸುವದಕ್ಕಿಂತ ಹೆಚ್ಚಾಗಿ ನನ್ನಲ್ಲಿ ನನಗೆ ವಿಶ್ವಾಸ ಹೆಚ್ಚಿಸಿಕೊಳ್ಳುವಲ್ಲಿ ಸಹಾಯಕಾರಿಯಾಯಿತು. ಮೊದಲ ದಿನವೇ ಕಾರು ಓಡಿಸಲು ಬರುವನಂತೆ ಓಡಿಸಿದ್ದು ಮನಸ್ಸಿಗೆ ಖುಶಿಯೊಂದಿಗೆ ಧೈರ್ಯ ತಂದಿತು. ಗುರುಗಳ ಮೆಚ್ಚುಗೆಗೂ ಪಾತ್ರನಾದೆ.
ಗುರುಗಳ ಆಸರೆ ಇಲ್ಲದೆ ಕಾರ್ ಓಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಶಾದುಲಿಯವರ ಕಾರ್ ಓಡಿಸಲಾರಂಭಿಸಿಯೇ ಬಿಟ್ಟೆ. ಆ ನಯವಾದ ರಸ್ತೆಗಳಲ್ಲಿ ಕಾರ್ ಒಡಿಸುವುದೆಂದರೆ ಏನೋ ಖುಶಿಯಾಗುತಿತ್ತು. ದಿನ ಕಳೆದಂತೆ ಶಾದುಲಿಯವರ ಕಾರು ನನ್ನ ಕಾರಾಗಿ ಪರಿವರ್ತನೆಗೊಳ್ಳತೊಡಗಿತು. ಬೇಸರ ಕಳೆಯಲು ಮತ್ತೊಂದು ಸರಿಯಾದ ದಾರಿ ಸಿಕ್ಕಂತಾಯಿತು. ಕಾರ್ ಕಾರ್ ಕಾರ್ ಕಾರೇ ಸರ್ವಸ್ವವಾಯಿತು. ವಾರಾಂತ್ಯ ಬಂದರೆ ಕಾರಿನಲ್ಲೇ ಜೀವನವೆನೋ ಅನ್ನುವ ಹಾಗೆ ಕಾರ್ ಓಡಿಸಲಾರಂಭಿಸಿದೆ. ಅಲ್ಲಿ ಅದೇ ’ಕಾರು’ಬಾರಾಗಿತ್ತು.
೩೦೦೦ ಮೈಲಿಯ ಪ್ರವಾಸ...
ಹೆಚ್ಚು ಕಡಿಮೆ ಎರಡು ತಿಂಗಳಾಗಿತ್ತು, ಪ್ರವಾಸದ ಸುಳಿವೇ ಇರಲಿಲ್ಲ. ಕ್ರಿಸ್ಮಸ್ ಸಲುವಾಗಿ ಇದ್ದ ೧೦ ದಿನಗಳ ರಜೆಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವ ನಿರ್ಧಾರ ಮಾಡಿದೆವು. ಈ ಬಾರಿಯ ಪ್ರವಾಸಕ್ಕೆ ನಿಗದಿಯಾದ ಸ್ಥಳ ಸ್ಯಾನ್ ಫ್ರಾನ್ಸಿಸ್ಕೊ (San Fransisco, CA) ಮತ್ತು ಟೆಲುರೈಡ್ (Telluride, CO). ಸ್ಯಾನ್ ಫ್ರಾನ್ಸಿಸ್ಕೊ ನಗರ ಫೀನಿಕ್ಸ್ ನಗರದ ವಾಯುವ್ಯ ಭಾಗದಲ್ಲಿತ್ತು. ಮೊದಲು ಪಸ್ಚಿಮದೆಡಗೆ ಕ್ರಮಿಸಿ ನಂತರ ತೀರದುದ್ದಕ್ಕೂ ಉತ್ತರದೆಡಗೆ ಚಲಿಸುತ್ತ ಹೋದೆವು. ಮುಂಜಾನೆ ೬ ಕ್ಕೆ ಹೊರಟ ನಾವು, ೭೫೦ ಮೈಲಿ ದೂರ ಕ್ರಮಿಸಿ ಗುರಿ ತಲುಪುವಷ್ಟರಲ್ಲಿ ರಾತ್ರಿ ೯ ಆಗಿತ್ತು. ೧೫ ತಾಸುಗಳ ಸುಧೀರ್ಘ ಕಾರಿನ ಪ್ರಯಾಣದಿಂದ ಬೇಸತ್ತು ಹೋಗಿದ್ದೆವು.
ಮರುದಿನದ ಕಾರ್ಯಕ್ರಮದಲ್ಲಿವಿಶ್ವ ವಿಖ್ಯಾತ ಗೋಲ್ಡನ್ ಗೇಟ್ ಸೇತುವೆ (Golden Gate Bridge) ಮೊದಲನೆಯದಾಗಿತ್ತು. ತಲುಪಲು ಸ್ವಲ್ಪ ಪರದಾಡಿದರೂ, ನಗರದ ಹೃದಯ ಭಾಗವಾಗಿ ಹಾದು ಕೊನೆಗೂ ಗೋಲ್ಡನ್ ಗೇಟ್ ಸೇತುವೆ ತಲುಪಿದೆವು. ದಾರಿ ತಪ್ಪಿದ್ದರಿಂದ ನಗರದ ಗಗನಚುಂಬಿ ಕಟ್ಟಡಗಳನ್ನು ನೋಡುವ ಭಾಗ್ಯ ನಮ್ಮದಾಗಿತ್ತು. ಆಗುವುದೆಲ್ಲ ಒಳ್ಳೆಯದಕ್ಕೇ.
ಶತಕಗಳ ಹಿಂದೆಯೇ ಇಂಥ ಒಂದು ಅದ್ಭುತ ಸೇತುವೆ ಕಟ್ಟಿದ್ದಾರೆಂದರೆ, ನಿಜವಾಗಲು ಅವರ ದೂರಾಲೋಚನೆಯ ಬಗ್ಗೆ ಹೆಮ್ಮೆಯಾಗುತ್ತದೆ. ಈ ಕಟ್ಟಡವನ್ನು ಕಟ್ಟಲು ಬೇಕಾದ ಸವಲತ್ತು
ಗೋಲ್ಡನ್ ಗೇಟ್ ಸೇತುವೆಗೆ ಪೈಪೋಟಿಯಲ್ಲಿದ್ದ ವಿಶ್ವ ವಿಖ್ಯಾತ ಬೇ ಸೇತುವೆಯನ್ನು (Bay Bridge) ಮರೆತರೆ ಹೇಗೆ? ಎರಡೂ ಸೇತುವೆಗಳು ನಾ ಮುಂದು ತಾ ಮುಂದು ಎನ್ನುವಂತಿದ್ದವು. ೮.೫ ಮೈಲಿ ಉದ್ದದ ಸೇತುವೆ ಕಡಲಿಗೆ ಕಟ್ಟಿದ ತೋರಣದಂತೆ ಗೋಚರಿಸುತಿತ್ತು. ಬೇ ಸೇತುವೆಯನ್ನು ಮಜಲುಗಳ ಸೇತುವೆಯೆಂದು ಕರೆದರೆ ತಪ್ಪಾಗಲಾರದು. ಪ್ರತಿ ದಿಕ್ಕಿನಲ್ಲಿ ಸಂಚರಿಸಲು ಪ್ರತ್ಯೇಕ ಮಳಿಗೆಗಳಿರುವ ಈ ಸೇತುವೆಯ ಮೇಲೆ ಹಾದು ಹೋಗುವುದೇ ಒಂದು ಉತ್ಸಾಹದ ಸಂಗತಿ.
ಸ್ಯಾನ್ ಫ್ರಾನ್ಸಿಸ್ಕೊ ಇಂದ ಹೊರಡುವ ಸಮಯ. ಬೆಳಗ್ಗೆ ೮ ಕ್ಕೆ ಹೊರಟಿದ್ದೆವು. ಬಂದ ದಾರಿಯನ್ನು ಅವಲಂಭಿಸದೇ, ಸಮುದ್ರ ತೀರವನ್ನು ಅನುಸರಿಸಿಕೊಂಡು ಸಾಗುವ ಮತ್ತೊಂದು ದಾರಿಯಲ್ಲಿ ಹಿಂದಿರುಗುವ ಯೋಜನೆ ಹಾಕಿಕೊಂಡೆವು. ಆ ಹಾದಿಯಲ್ಲಿ ’ಸ್ವರ್ಗ’ದ ಮೂಲಕ ಹಾದು ಹೋಗುವ ಸೌಭಾಗ್ಯ ನಮಗೆ ಒದಗಿ ಬಂದಿತು. ೧೭ ಮೈಲಿ ಉದ್ದದ ಆ ಖಾಸಗಿ ರಸ್ತೆಯ ಪಯಣ ಈ ೩೦೦೦ ಮೈಲಿ ಪ್ರಯಾಣದ ಮರೆಯಲಾಗದಂತ ಅಂಶ. ಒಂದು ಕ್ಷಣ ನಾನು NH17 ರಲ್ಲಿಹೋಗುತ್ತಿದ್ದೇನೇನೋ ಎಂದು ಎನ್ನಿಸಿತ್ತು. ಒಂದೆಡೆ ಬೆಟ್ಟ ಗುಡ್ಡ ಮತ್ತೊಂದೆಡೆ ವಿಶಾಲವಾಗಿ ಹರಡಿದ್ದ ಸಾಗರ ರಾಶಿ. ಸ್ವರ್ಗಕ್ಕೆ ಮೂರೇ ಗೇಣು. ಗೂಡು ಸೇರುವಷ್ಟರಲ್ಲಿ ಸಮಯ ರಾತ್ರಿ ಎರಡಾಗಿತ್ತು.
ಭಾಗ-೨
ಒಂದು ದಿನದ ಮಟ್ಟಿಗಿನ ವಿಶ್ರಾಂತಿಯ ನಂತರ, 480 ಮೈಲಿ ಆಸುಪಾಸಿನ ದೂರದಲ್ಲಿದ್ದ ಕೊಲೊರಾಡೊ ರಾಜ್ಯಕ್ಕೆ ಸೇರಿದ ಟೆಲುರೈಡ್ (Telluride) ಎಂಬ ಊರಿನತ್ತ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ದಾರಿಯುದ್ದಕ್ಕೂ ರಣ ರಣ ಗುಡ್ಡಗಳಿಂದ ಕೂಡಿದ್ದ ಪ್ರಯಾಣ ಹೇಳುವಂತಹದ್ದಿಲ್ಲದಿದ್ದರೂ, ಜೊತೆಗಿದ್ದ ಸಂಗಡದಿಂದ ಚೈತನ್ಯದಾಯಕವಾಗಿತ್ತು. ಬೆಳಗ್ಗೆ ಸುಮಾರು 10ಕ್ಕೆ ಹೊರಟ ನಾವು ಡ್ಯುರಾಂಗೊ (Durango) ಎಂಬ ಊರು ತಲುಪುವಷ್ಟರಲ್ಲಿಸಂಜೆ ನಾಲ್ಕಾಗಿತ್ತು. ಅಂದು ತಂಗುವ ವ್ಯವಸ್ಥೆ ಕೂಡ ಅಲ್ಲಿಯೇ ಆಗಿತ್ತು. ಬಿರುಬಿಸಿಲಿನಲ್ಲಿದ್ದ ಪ್ರಯಾಣದಿಂದ ಥಟಾತ್ ಮಂಜಿನ ಮನೆಗೆ ಬಂದಂತಾಗಿತ್ತು. ಎತ್ತ ನೋಡಿದರಲ್ಲಿ ಶ್ವೇತ ವರ್ಣ; ಬೆಟ್ಟದೆತ್ತರಕ್ಕೆ ಗುಡ್ಡೆ ಬಿದ್ದಿದ್ದ ಮಂಜು. ಆ ಹೊಸ ಅನುಭವ ಹಿತವಾಗಿತ್ತು. ನಾವು ಕಾಯ್ದಿರಿಸಿದ್ದ ಮೋಟೆಲ್ಲಿಗೆ(Motel) ಬಂದೆವು. ಕಾರಿನಿಂದ ಇಳಿದಿದ್ದೆ ತಡ, ಮೈಯೆಲ್ಲ ಹೆಪ್ಪುಗಟ್ಟುವಂತಿತ್ತು. ಸಹಿಸಲಾರದಷ್ಟು ಛಳಿಯಿದ್ದರೂ, ಅದನ್ನು ಅನುಭವಿಸುವ ಹುಮ್ಮಸ್ಸು ನಮ್ಮ ಉತ್ಸಾಹವನ್ನು ಮೊಟಕುಗೊಳಿಸಲಿಲ್ಲ.
ತತ್ಕ್ಷಣದಲ್ಲಿ ತಯಾರಾದ ನಾವು, ಕಾಲ್ನಡಿಗೆಯಲ್ಲಿ ಊರು ಸುತ್ತುವ ಕಾಯಕಕ್ಕೆ ಅಣಿಯಾದೆವು. ನಮ್ಮ ಉತ್ಸಾಹಕ್ಕೆ ಮೆರುಗು ನೀಡುವುದಕ್ಕೆ ಇನ್ನೊಂದು ವಿಶೇಷ ನಮ್ಮನ್ನು ಕಾದಿತ್ತು. ಅಂದು ಹೊಸ ವರ್ಷದ ಆದಿ. ಇನ್ನೂ ಕೇಳಬೇಕೆ? ರಸ್ತೆಗಳಲ್ಲೆಲ್ಲೆಲ್ಲೂ ದೀಪಾಲಂಕಾರ; ಸಂಭ್ರಮದ ವಾತಾವರಣ. ಅಲ್ಲೊಂದು ಉತ್ಸವವೇ ನಡೆಯುತ್ತಿತ್ತು. ನಾವು ಅದೆನ್ನೆಲ್ಲ ಆಹ್ಲಾದಿಸುತ ನಡೆಯುತ್ತ ಮುಂದೆ ಸರಿದೆವು. ಜನರ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ. ಒಬ್ಬೊಬ್ಬರದು ಒಂದೊಂದು ತರಹದ ಸಂಭ್ರಮ. ಕೆಲವರು ತಮ್ಮ ಆಪ್ತರೊಡನೆ ಸಮಯ ಕಳೆಯುತ್ತ ಸಂಭ್ರಮಿಸಿದರೆ, ಇನ್ನೂ ಕೆಲವರು ಕೊರಳುಕ್ಕುವಷ್ಟು ಪಾನಮತ್ತರಾಗಿ ತಮ್ಮದೇ ಲೋಕದಲ್ಲಿದ್ದರು. ಇದೆಲ್ಲ ನೋಡುತ್ತ ಆ ಸಂಭ್ರಮವನ್ನು ಆನಂದಿಸುವುದೇ ನಮಗೊಂದು ಸಂಭ್ರಮದ ವಿಷಯವಾಗಿತ್ತು. ಈ ಸಂಭ್ರಮದ ಸುಳಿಯಲ್ಲಿ ತೇಲುತ್ತಲೇ ಅಂದಿನ ಕಾರ್ಯಕ್ರಮಗಳಿಗೆ ತೆರೆ ಎಳೆದೆವು.
ಮರುದಿನ ಬೆಳ್ಳಂಬೆಳಗೆ ಶುರುವಾಯಿತು ಟೆಲುರೈಡ್ ಕಡೆಗಿನ ಪ್ರಯಾಣ. ಈ ದಾರಿಯಲ್ಲಿತ್ತು ಪ್ರಸಿದ್ಧವಾದ "ಮಿಲಿಯನ್ ಡಾಲರ್ ಹೈವೇ". ಒಂದು ರಸ್ತೆಗೆ ದಶಲಕ್ಷ ಡಾಲರ್ ಬೆಲೆಯೇ? ಇದು ಆ ರಸ್ತೆಯ ನೈಸರ್ಗಿಕ ಸಿರಿವಂತಿಕೆಯ ಅಂದಾಜು ಬೆಲೆಯೆಂದೇ ಹೇಳಬಹುದು. ಎತ್ತ ನೋಡಿದರತ್ತ ಮಂಜಿನ ಹೊದಿಕೆಯ ಪರ್ವತ ಶ್ರೇಣಿಗಳು; ಮಂಜು ಚುಮುಕಿಸಿದ ಶಂಕಮರಗಳು. ಭೂತಾಯಿ ಹಸಿರು ಅಂಚಿನ ಬಿಳಿ ಸೀರೆಯನ್ನೇ ಉಟ್ಟಿದ್ದಳು ಎನ್ನುವ ಹಾಗಿತ್ತು. ಆ ಬಿಳಿ ಸೀರೆಯಲ್ಲಿ ಒಂದಿಷ್ಟು ಕಲೆಗಳಿಲ್ಲದೆ, ಸ್ವಚ್ಛಂದವಾಗಿತ್ತು. ತಿರುವು-ಮುರುವುಗಳನ್ನೊಳಗೊಂಡ ಕಡಿದಾದ ರಸ್ತೆಯ ಒಂದೆಡೆ ಪಾತಾಳ-ಸದೃಶ ಕಣಿವೆ, ಮತ್ತೊಂದೆಡೆ ಆಳೆತ್ತರದ ಪರ್ವತ ಸಾಲು. ರಸ್ತೆಯ ಎರಡೂ ಬದಿಗಳಲ್ಲಲ್ಲದೆ ರಸ್ತೆಯ ಮೇಲೂ ಒಂದಿಷ್ಟು ಮಂಜಿನ ಪ್ರೋಕ್ಷಣೆಯಾಗಿತ್ತು. ಹಾಗಾಗಿ ಕಾರಿನ ಪ್ರಯಾಣ ಕಷ್ಟಕರವಾಗಿತ್ತು. ಆದರೆ ಗೆಳೆಯ ಶಶಿ ನುರಿತವನಾಗಿದ್ದರಿಂದ ಆ ಕಷ್ಟದ ತೀವ್ರತೆಯ ಅರಿವು ನಮಗಾಗಿರಲಿಲ್ಲ. ನಿಧಾನಗತಿಯಲ್ಲೇ ಮುಂದುವರಿಯುತ್ತ, ಮನಸ್ಸು ತೃಪ್ತವಾಗುವಷ್ಟು ಪ್ರಕೃತಿಯ ಸೊಬಗನ್ನು ಸವಿದು ಪುನಃ ಡ್ಯುರಾಂಗೊಗೆ ಮರಳಿದೆವು. ಈ ದಾರಿಯುದ್ದಕ್ಕೂ ನನ್ನ ಮನಸ್ಸು ಗುನುಗುನಿಸಿದ್ದು ಜಿ.ಪಿ.ರಾಜರತ್ನಂರವರ ಲಿಖಿತ ರಾಜು ಅನಂತಸ್ವಾಮಿ ಗಾಯನದ "ಭೂಮಿನ್ ತಬ್ಬಿದ್ ಮೋಡಿದ್ದಂಗೆ, ಬೆಳ್ಳಿ ಬಳದಿದ್ದ್ ರೋಡಿದ್ದಂಗೆ" ಕವನ. ಮಡಿಕೇರಿಯಲ್ಲಿ ಆ ಮಂಜಿನ ಸೊಬಗನ್ನು ನೋಡುವ ಅದೃಷ್ಟ ನನ್ನದಾಗಿರಲಿಲ್ಲ, ಆದರೆ ಆ ಸೌಭಾಗ್ಯ ಇಲ್ಲಿ ಒದಗಿ ಬಂತು. ಮರುದಿನ ಡ್ಯುರಾಂಗೊಯಿಂದ ಹೊರಟು ತಮ್ಮ ತಮ್ಮ ಗೂಡು ಸೇರಿದೆವು. ಅಲ್ಲಿಗೆ ಮುಗಿದಿತ್ತು ೩೦೦೦ ಮೈಲಿಯುದ್ದದ ಕಾರಿನ ಪ್ರವಾಸ. ಅದಕ್ಕೆ ಸರಿಯಾಗಿ ಕ್ರಿಸ್ಮಸ್ ಸಮಯದ ೧೦ ದಿನಗಳ ರಜೆಯೂ ಮುಗಿದಿತ್ತು. ಬಂದಿತ್ತು ಆರ್ಥಿಕ ಅವನತಿ (Recession)...
ನನಗದೊಂದು ಕಹಿ ಅನುಭವ. ಆರ್ಥಿಕವಾಗಿ ಯಾವುದೇ ತೊಂದರೆ ಆಗದೇ ಇದ್ದರೂ ನಮ್ಮ ದೈನಂದಿನ ಆಗು ಹೋಗುಗಳ ಮೇಲೆ ಅದು ತೀವ್ರ ಪ್ರಭಾವ ಬೀರಿತ್ತು. ಆರ್ಥಿಕ ಅವನತಿಯ ಅಬ್ಬರ ಜೋರಾಗೇ ಇತ್ತು. ನಮ್ಮೊಡನಿದ್ದ ಎಲ್ಲ ಗೆಳೆಯರಿಗೆ ಹಿಂತಿರುಗಿ ಬರುವಂತೆ ಅಪ್ಪಣೆಯಾಯಿತು. ಒಬ್ಬರಾದ ಮೇಲೆ ಒಬ್ಬರು ಹೊರಟು ಹೋದರು. ೧೫-೨೦ ದಿನಗಳಲ್ಲಿ ಇಲ್ಲಿದ್ದ ಗೆಳೆಯರೆಲ್ಲ ಖಾಲಿಯಾಗಿಬಿಟ್ಟರು. ಬರೀ ಬೆರಳೆಣಿಕೆಯಷ್ಟು ಜನ ಉಳಿದುಕೊಂಡೆವು. ನನ್ನನ್ನು ಮತ್ತು ನನ್ನ ಗೆಳೆಯ ಶ್ರೀಕಾಂತನನ್ನು ಬಿಟ್ಟರೇ ಇಲ್ಲಿ ಉಳಿದುಕೊಂಡವರೆಲ್ಲರೂ ಸಂಸಾರಿಗಳು. ನಮ್ಮೊಡನೆ ಸಂಸಾರಿಗಳ ಒಡನಾಟ ಅಷ್ಟಕ್ಕಷ್ಟೇ ಇತ್ತು. ಹೀಗಾಗಿ ಗೆಳೆಯರ ಹಿಂಡಿಲ್ಲದೇ ಜೀವನ ಬಿಕೋ ಎನ್ನುವಂತಾಯಿತು. ಹಾಗೋ ಹೀಗೋ ಮಾಡಿ ಎರಡು ತಿಂಗಳು ಕಳೆದವು. ಆರ್ಥಿಕ ಸ್ಥಿತಿಯಲ್ಲಿ ಕೂದಲೆಳೆಯಷ್ಟು ಸುಧಾರಣೆ ಕಂಡುಬಂದಿತ್ತು. ಮತ್ತೆ ಸಹೋದ್ಯೋಗಿಗಳು ಇತ್ತ ಬರಲಾರಂಭಿಸಿದರು. ಇದರ ಪರಿಣಾಮ ಹೇಗಿತ್ತೆಂದರೇ, ಸಹೋದ್ಯೋಗಿಗಳು ಬರುವ ಸೂಚನೆ ಸಿಕ್ಕರೆ ಸಾಕು, ಅವರನ್ನೂ ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಹಾಜರಾಗಿಬಿಡುತ್ತಿದ್ದೆವು. ಬರಬರುತ್ತ ಆರ್ಥಿಕ ಸ್ಥಿತಿಯೂ ಸುಧಾರಿಸತೊಡಗಿತು.
’ನಳ ಮಹಾರಾಜ’ನ ಅವತಾರ...
ನಾನಿಲ್ಲಿದ್ದ 9 ತಿಂಗಳಲ್ಲಿ ಎರಡು ವಿಷಯಗಳಲ್ಲಿ ನನ್ನ ಕಲಿಕೆಯ ಪಥವು ತೀಕ್ಷ್ಣ-ಏರುಗತಿಯಲ್ಲಿ(exponential) ಸಾಗಿತ್ತು. ಅದರಲ್ಲಿ ಮೊದಲನೆಯದು ಪಾಕಶಾಸ್ತ್ರ. ತಿನ್ನಲು ಬಿಟ್ಟರೆ ಬೇರೆ ವಿಷಯಕ್ಕಾಗಿ ಅಡುಗೆಮನೆಯ ಕಡೆ ತಲೆ ಹಾಕಿದವನಲ್ಲ ನಾನು. ಅದಲ್ಲದೆ ಇಲ್ಲಿನ ಉಪಹಾರಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಅದರಿಂದ ಅನಿವಾರ್ಯ ಪರಿಸ್ಥಿತಿ; ಬೇರೆ ದಾರಿಯೇ ಇರಲಿಲ್ಲ. ಮಾಡಿದ್ದುಣ್ಣೋ ಮಹರಾಯ ಎಂಬ ಸಂಗತಿ. ಮೊದಲು ಕಲಿತದದ್ದು ನನ್ನ ಇಷ್ಟಕರವಾದ ಟೊಮೆಟೊ ಗೊಜ್ಜು. ಅದೊಂದಿದ್ದರೆ ಬೇರೆ ಯಾವ ಭಕ್ಷ್ಯಗಳು ಬೇಕಿಲ್ಲ. ಟೊಮೆಟೊ ಗೊಜ್ಜು ಸ್ಪೆಶಲಿಸ್ಟ್ ಎಂಬ ಬಿರುದು ತನ್ನದಾಗಿಸಿಕೊಂಡೆ. ಒಂದೆರಡು ತಿಂಗಳಲ್ಲಿ ಅಡುಗೆಗೆ ಬೇಕಾದ ಹದ ಅರಿಯಿತು. ಅತ್ಯಮೂಲ್ಯ ತಿಂಡಿ ತಿನಿಸುಗಳನ್ನು ಬಿಟ್ಟು ಅದರ ನಂತರದ ಹಂತಕ್ಕೆ ಹೋಗುವ ಹಂಬಲದಿಂದ ಹೊಸ ತಿಂಡಿ ತಿನಿಸುಗಳ ಕಡೆಗೆ ಗಮನ ಹರಿಸಲಾರಂಭಿಸಿದೆ. ಅಲ್ಲಿಂದ ಶುರುವಾಯಿತು ಪಾಕಶಾಸ್ತ್ರದ ಪ್ರಯೋಗಗಳು. ನನ್ನ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿ ನೆನಪಾಗುವುದು ಮಂಗಳೂರು ಬನ್ಸ್ (ಕರ್ನಾಟಕದ ಕರಾವಳಿಯ ಒಂದು ವಿಶೇಷ ತಿಂಡಿ), ಇದನ್ನು ಅನುಸರಿಸಿ ನೆನಪಾಗುವ ಬೇರೆ ಪ್ರಯತ್ನಗಳೆಂದರೆ ಉದ್ದಿನ ದೋಸೆ (ಸೂಚನೆ: ಅಕ್ಕಿ ಹಾಗೂ ಬೇಳೆಯನ್ನು ಮಿಕ್ಸಿಯಲ್ಲಿ ರುಬ್ಬಿ ಹಿಟ್ಟನ್ನು ನಾನೇ ತಯಾರಿಸುತ್ತಿದ್ದೆ:)), ಆಲುಗಡ್ಡೆ ಬೋಂಡ, ಇರುಳ್ಳಿ ಪಕೋಡ, ಜಾಮೂನು, ಬೇಳೆ ಸಾರು, ಪೂರಿ, ಚಪಾತಿ ಇತ್ಯಾದಿ. ಇವೆಲ್ಲ ಸಸ್ಯಹಾರಿ ತಿನಿಸುಗಳಾದರೆ ಮಾಂಸಹಾರಿ ಅಡುಗೆಯಲ್ಲೂ ತಕ್ಕಮಟ್ಟಿಗೆ ನಿಪುಣತೆ ಪಡೆದೆ. ಪ್ರಯೋಗಗಳೆಲ್ಲ ಸಫಲವಾದವು ಎಂಬುದು ನನಗೆ ಸಂತಸದ ವಿಷಯವಾಗಿತ್ತು ಹಾಗೂ ತೃಪ್ತಿ ತಂದಿತ್ತು.
ವಿ.ಸೂ: ಓದುಗರೆ, ಮೇಲೆ ಸೂಚಿಸಿರುವ ತಿಂಡಿ ತಿನಿಸುಗಳೆಲ್ಲ ನನಗಿದ್ದ ಅಡುಗೆಯ ಜ್ಞಾನವನ್ನು ಆಧಾರವಾಗಿಟ್ಟುಕೊಂಡೇ "ವಿಶೇಷ" ಎಂದು ನಮೂದಿಸಿದ್ದೇನೆ :).
ಪಾಕಶಾಸ್ತ್ರವನ್ನಲ್ಲದೇ, ಮತ್ತೊಂದು ತೃಪ್ತಿಕರವಾದ ವಿಷಯವೆಂದರೆ ಕಛೇರಿಯಲ್ಲಿನ ದೈನಂದಿನ ವೃತ್ತಿಪರ ವಿಷಯಗಳಲ್ಲಿ ಗಣನೀಯ ವೃದ್ಧಿ (ಗಮನಿಸಿ: ನನ್ನ ವೃತ್ತಿಯ ಬಗ್ಗೆಯೂ ಇಲ್ಲಿ ನಮೂದಿಸಿದ್ದೇನೆ :)). ಕೆಲ ನೂತನ ವಿಷಯಗಳ ಪರಿಚಯವಾಗುವ ಕಾರಣ ಇಲ್ಲಿನ ದೈನಂದಿನ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಿತ್ತು. ಹೊಸ ವಿಷಯಗಳ ಪರಿಚಯದಿಂದ ಕಲಿತ ಪಾಠ ಮರೆಯುವಂತದಲ್ಲ. ಇಲ್ಲಿದ್ದ ನುರಿತರ ಜೊತೆಗಿನ ಒಡನಾಟ, ಅವರೊಂದಿಗಿನ ಚರ್ಚೆ, ಸಮಾಲೋಚನೆ ನಿಜಕ್ಕೂ ಫಲದಾಯಕವಾಗಿತ್ತು. ಅಪಾರ ಜ್ಞಾನ ಭಂಡಾರವನ್ನೇ ಹೊತ್ತಿದ್ದರೂ, ಅದನ್ನು ಹಂಚಿಕೊಳ್ಳುವುದಕ್ಕೆ ಕಿಂಚಿತ್ತು ಹಿಂಜರಿಯುತ್ತಿರಲಿಲ್ಲ. ವಿದ್ಯಾ ದಾನ ಮಹಾ ದಾನ ಎನ್ನುವುದೇ ಅವರ ಮೂಲಮಂತ್ರವಾಗಿತ್ತೆನ್ನಬಹುದು.
ಇಲ್ಲಿದ್ದಾಗ ನನಗೆ ಗುರುವಾಗಿದ್ದವರು ಅಮೇರಿಕನ್ನರೇ ಆದ ನಯ್ಗಾರ್ಡ್ ಕ್ಲಾರೆನ್ಸ್ ಮತ್ತು ಭಾರತೀಯರಾದ ಫಹಾದ್ ನಿರೀತಿಂಗಳ್ ಎನ್ನುವ ಇಬ್ಬರು ಮಹಾನುಭಾವರು. ಇವರಿಬ್ಬರನ್ನು ನಾನು ನನ್ನ ಜೀವನದಲ್ಲಿ ನೆನಯದಿದ್ದರೆ ಅದು ಬಹು ದೊಡ್ಡ ತಪ್ಪಾದೀತು. ಇವರಿಬ್ಬರು ತಮ್ಮ ತಮ್ಮ ಕಸುಬಿನಲ್ಲಿ ಎತ್ತಿದ ಕೈ. ಬರೀ ನುರಿತವರು ಎಂದರೆ ಸಾಲದು; ಅವರ ಕಸುಬಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಅರಿದು ಕುಡಿದಿದ್ದರು. ಎಷ್ಟೇ ಅರಿತವರಾಗಿದ್ದರೂ, ಅದರ ಅಹಂ ಅವರಿಗಿರಲಿಲ್ಲ. ಅದೊಂದೇ ಕಾರಣದಿಂದ ಅವರ ಜೊತೆಗಿನ ನನ್ನ ಭಾಂದವ್ಯ ಅತ್ತ್ಯುತ್ತಮವಾಗಿತ್ತು. ಇಬ್ಬರೂ ನನಗೆ ತುಂಬ ಆಪ್ತರಾಗಿದ್ದರು. ಇವರಿಬ್ಬರನ್ನು ’ನನ್ನ ಜೀವನದಲ್ಲಿ ಬದಲಾವಣೆ ತಂದವರ’ ಪಟ್ಟಿಗೆ ಸೇರಿಸಿಬಿಟ್ಟಿದ್ದೆ. ಮೂರು ವರ್ಷದಲ್ಲಿ ಕಲೆಯಲಾಗದಿದ್ದನ್ನು ಇಲ್ಲಿದ್ದ ಹತ್ತು ತಿಂಗಳಲ್ಲಿ ಕಲಿತಿದ್ದೆ. ನನ್ನಲ್ಲಿ ಅದೊಂದು ರೀತಿಯ ಧೈರ್ಯ ತಂದಿತ್ತು.
ಮತ್ತೊಂದು ನೆನಸಿಕೊಳ್ಳುವ ವಿಷಯವೆಂದರೆ, ಗೆಳೆಯರ ಗಳಿಕೆ. ಇಲ್ಲಿದ್ದಾಗ ನಾನು ಹಲವಾರು ಗೆಳೆಯರನ್ನು ಗಳಿಸಿದೆ. ಆಗೊಮ್ಮೆ ಈಗೊಮ್ಮೆ Hi, Hello ಎಂದು ಮಾತನಾಡುತ್ತಿದ್ದವರು ಕ್ಷಣ ಮಾತ್ರದಲ್ಲಿ "ಏನ್ಲಾ" ಎನ್ನುವ ಮಟ್ಟಿಗೆ ಗೆಳೆಯರಾಗಿ ಬಿಟ್ಟಿದ್ದರು. ವಾರಾಂತ್ಯ ಬಂತೆಂದರೆ ಎಲ್ಲರೂ ಒಂದೆಡೆ ಸೇರಿ ಕಾಲಹರಣ ಮಾಡುವುದು, ಒಟ್ಟಿಗೆ ಅಡುಗೆ ಮಾಡಿ ಊಟ ಮಾಡುವುದು. ಇವೆಲ್ಲ ಒಂದು ತರಹದಲ್ಲಿ ಖುಶಿ ಕೊಡುತ್ತಿತ್ತು.
ಈ ರೀತಿಯಿಂದ ಇಲ್ಲಿದ್ದ ಹತ್ತು ತಿಂಗಳು ನನ್ನಲ್ಲಿ ಬದಲಾವಣೆಗಳನ್ನು ತಂದುಕೊಳ್ಳಲು ಸಾಕಷ್ಟು ಸಹಾಯಕಾರಿಯಾಯಿತು. ಎಲ್ಲಾ ವಿಷಯವೂ ಒಂದಲ್ಲ ಒಂದು ತರಹದ ಕಲಿಕೆಯಾಗಿತ್ತು. ಇಂತಹ ಅವಕಾಶ ಕಲ್ಪಿಸಿಕೊಟ್ಟ ದೇವರಿಗೆ ನನ್ನದೊಂದು ಪ್ರಣಾಮ.
ಹತ್ತು ತಿಂಗಳ ಅನುಭವವನ್ನು ಅಕ್ಷರಗಳಲ್ಲಿ ಬಣ್ಣಿಸಲು ಪ್ರಯತ್ನಿಸಿದ್ದೇನೆ. ನನ್ನ ಅನುಭವಗಳ ವರ್ಣನೆ ಹೇಗಿತ್ತು ಎಂದು ಖಂಡಿತ ಬರೆಯುತ್ತೀರಲ್ಲ? ನಿಮ್ಮ ಸಲಹೆಗಳನ್ನು ನೀರಿಕ್ಷಿಸುತ್ತಿರುತ್ತೇನೆ.
ಜೈ ಕರ್ನಾಟಕ ಮಾತೆ.
ಇಂತಿ ನಿಮ್ಮ,
ಕೊಲ್ಲೆ
ಸೂಚನೆ: ಇದು ನನ್ನ 2008ರ ಅಮೇರಿಕ ಪ್ರವಾಸದ ಅನುಭವ. ಭಾಗ-೧ ನ್ನು 2008ರಲ್ಲೇ ಬರೆದಿದ್ದೆ. ಕಾರಣಾಂತರಗಳಿಂದ ಅದು ಅಪೂರ್ಣವಾಗಿ ಉಳಿದಿತ್ತು. ಆ ಅಪೂರ್ಣತೆಯನ್ನು ನನ್ನಲ್ಲಿದ್ದ ಟಿಪ್ಪಣಿಗಳ ಆಧಾರದ ಮೇಲೆ ಈ ನನ್ನ ಎರಡೆನೆಯ ಪ್ರವಾಸದ ಹೊತ್ತಿನಲ್ಲಿಪೂರ್ಣಗೊಳಿಸಿದ್ದೇನೆ.

13 comments:
Uttamavada baraha... Ondu kshana Americavannu anubhavisidantayitu... :)
America America!!!
hmmm :D nice travel blog very good keep writing !!!
inashtu nimma anubhavavaneela Dhakalisi
America andare hengideno eno..samskriti,technology,jieeva heege... annuvantaha nannantha odugananige americakke hogi bandantaha anubhavavayitu.....Jai Karnataka....heege bariyutirendu haraike...
Hi good one!!! keep it up!!!
ಮನಸ್ಸಿಗೆ ಮುದ ನೀಡುವ ಮಧುರ ಅನುಭವಗಳ ಸರಮಾಲೆ
ಸ್ನೇಹದಿಂದ:ಮಹಾಂತೇಶ(ಮಾನು)
"Samskruti" effectively presented your "samskruthi" Bahala olleya prayatna... Intha barahagalu nijakku "refreshing" agiruthave. Kannada bhashe eshtu chethohari! Alwa...
Good Job... :)
ಅನುಭವಿಸಿದ ಅನುಭವ, ಆದರೊಮ್ಮೆ ಅನುಭವಿಸಲೆಬೇಕೆಂಬ ಹಂಬಲ.....
ತುಂಬ ಚೆನ್ನಾಗಿದೆ... :)
Tumba chennagi bardideeya Kano ninna anubhavagalanna..
Kannada odhuta manasige eno thampu.. Barediro
Shyli kuda tumba chennagide.. You should write more often.
kolle... tumbaa chennaagi kannada dallee explain maadidiyaaa... good kanammaaa...........
Maga thumba chennagide... Thumba dinadina odona andkolthidde, ivatthu time aythu... Kanndadalli neenu bariyo shyli chennagide... Mele itko (Keep it up)... But kesuku annodu yako bere thara keltha ide maga...:):)
very nice :)
tumba chennagi bardiddira sir Odhi kushi aytu have a nice time...
Post a Comment